Total Pageviews

Tuesday, March 24, 2015

ಮೊಳುದುದ್ದ ಹೂವು…..ಮಾರುದ್ದದ ವಿಶ್ವಾಸ..

ದಿನಾ ಕೆಲಸಕ್ಕೆ ಹೋಗುವಾಗ ರಸ್ತೆಯ  ಟ್ರಾಫಿಕ್  ಸಿಗ್ನಲ್ ಒಂದರಲ್ಲಿ ಕಾಯಬೇಕಾಗುತ್ತದೆ. ಅಲ್ಲೊಬ್ಬ  ಮಲ್ಲಿಗೆ ಹೂವು ಮಾರುವವನು  ನಿಂತ ವಾಹನಗಳ ಹತ್ತಿರ ಬಂದು ‘ಹೂವು ಬೇಕೆ’ ಎನ್ನುವನು. ಕೆಲವರು ಬೇಡ ಅನ್ನುವುದು, ಕೆಲವರು ಹೂ ಕೊಳ್ಳುವುದು ನಡೆಯುತ್ತಿರುತ್ತದೆ. ಅರಳುವ ಮೊಗ್ಗುಗಳನ್ನು ಪೋಣಿಸಿರುವ ಮಾಲೆಗಳನ್ನು ಮಾರುತ್ತಿರುವ ಇವರ ಭವಿಷ್ಯ ಅರಳುವುದು ಯಾವಾಗಲೋ ಎನಿಸುತ್ತದೆ. ಅಷ್ಟರಲ್ಲಿ ಹಸಿರು ಸಿಗ್ನಲ್ ಬಂದು ನಿಂತ ಗಾಡಿಗಳೆಲ್ಲಾ ಹೋಗಿ ಇನ್ನಷ್ಟು ಕೆಲವು ಬಂದು ಸೇರುತ್ತವೆ. 
ಕೆಲವು ದಿನಗಳ ಹಿಂದೆ, ಸಿಗ್ನಲ್ ಬಳಿ ನಿಂತಿದ್ದಾಗ ಮಲ್ಲಿಗೆಹೂ ಮಾರುವಾತ ‘ಹೂ ಬೇಕೆ’ ಎಂದು ಕೇಳುತ್ತಾ ಬಂದ. ‘ಬೇಡ’ ಎಂದಿದ್ದಾಯಿತು. ಯಾಕೆಂದರೆ, ನಾನು ಹೂ ಮುಡಿಯುವುದು ಸಮಾರಂಭಗಳಿಗೆ ಹೋಗುವುದಿದ್ದರೆ ಮಾತ್ರ. ಇನ್ನು ಮನೆಯ ದೇವರ ಫೊಟೋಗಳಿಗೆ , ಎಮ್ಮ ಮನೆಯಂಗಳದ ಹೂಗಳೇ ಸಾಕಷ್ಟಿವೆ. ಮೇಲಾಗಿ,  ದೇವರ ಮನೆಗೆ ನಮ್ಮೆಜಮಾನ್ರು ಉಸ್ತುವಾರಿ ಸಚಿವರು. ಹಾಗಾಗಿ ನಾನು ಮಲ್ಲಿಗೆ ಹೂ ಕೊಳ್ಳುವ ಸಂದರ್ಭ ಅಪರೂಪ. ಈತ ಕೇಳಿದ್ದಾಗ ಮಾತ್ರ ಕೆಲವೊಮ್ಮೆ  ಹೂವನ್ನು ಖರೀದಿಸುತ್ತಿದ್ದೆ.
ಕಳೆದ ತಿಂಗಳು ಅದೊಂದು ದಿನ,  ಅದೇ ಸಿಗ್ನಲ್ ನಲ್ಲಿ, ನಾನು ಕಾರು ನಿಲ್ಲಿಸಿದ್ದೆ.  ಇನ್ನೇನು ಹಸಿರು ಸಿಗ್ನಲ್ ಬರಬೇಕು, ಅಷ್ಟರಲ್ಲಿ  ಆತ ಅದೆಲ್ಲಿದ್ದನೋ  ಒಂದು ಮೊಳದಷ್ಟು ಹೂವನ್ನು ನನಗೆ ಕೊಟ್ಟ. ನಾನು ಗಡಿಬಿಡಿಯಲ್ಲಿ   10  ರೂ ಚಿಲ್ಲರೆ ಇಲ್ಲ ಎನ್ನುತ್ತಾ, 100  ರೂ ಕೊಡಲು ಹೊರಟೆ.  ಅದು  ಹೇಗೋ ಕೈತಪ್ಪಿ ರಸ್ತೆಗೆ ಬಿತ್ತು.  ಹಸಿರು ಸಿಗ್ನಲ್ ಬಂದೇ ಬಿಟ್ಟಿತು, ಹಿಂದಿನ ವಾಹನಗಳ ಹಾರ್ನ್ ಶುರುವಾಗಿ   ಆ ಚಾಲಕರ ಕೋಪಕ್ಕೆ ತುತ್ತಾಗುವ  ನಾನು ಹೊರಡಲೇ ಬೇಕಲ್ಲಾ ಎಂದು ಕಾರು ಚಲಾಯಿಸುತ್ತಿದ್ದಂತೆ, ಹೂ ಮಾರುವಾತ ಓಡೋಡಿ ಬಂದು ರಸ್ತೆಗೆ ಬಿದ್ದಿದ್ದ ನೂರರ ನೋಟನ್ನು ಕಾರಿನ ಒಳಕ್ಕೆ ಹಾಕಿ ‘ದುಡ್ಡು ನಾಳೆ ಕೊಡಿ’ಎಂಬಂತೆ ಕೈಸನ್ನೆ ಮಾಡಿದ. ಅಂತೂ ಆವತ್ತು ನಾನು ದುಡ್ಡು ಕೊಡದೇ ಹೂ ಪಡೆದಂತಾಯಿತು.
ಸಿಗ್ನಲ್ ನಲ್ಲಿ ವಾಹನಗಳ ದೊಂಬಿಯಲ್ಲಿ, ಕೈತಪ್ಪಿ ಹೋದ ಆ ನೂರರ ನೋಟು ಯಾವುದಾದರೂ  ವಾಹನದ ಚಕ್ರಕ್ಕೆ ಸಿಕ್ಕಿ ಕೊಳೆಯಾಗುವ ಅಥವಾ ಹರಿಯುವ  ಸಾಧ್ಯತೆ ಇತ್ತು.  ಯಾರಾದರೂ ಹೆಕ್ಕಿದ್ದರೂ ನಾನು ಗಮನಿಸಲು ಸಾಧ್ಯವಿಲ್ಲವಾಗಿತ್ತು. ಆತ ತಾನೇ ಇಟ್ಟುಕೊಂಡಿದ್ದರೂ ನನಗೇನೂ ಗೊತ್ತಾಗುತ್ತಿರಲಿಲ್ಲ.  ಒಟ್ಟಿನಲ್ಲಿ ಆತನ ಪ್ರಾಮಾಣಿಕತೆ ಮೆಚ್ಚಿಗೆಯಾಯಿತು.
ನಾಳೆ ಆತನಿಗೆ ಮರೆಯದೆ  ಹಣ  ಕೊಡಬೇಕು ಎಂದು ಬೆಳಗ್ಗೆ ಹೊರಡುವಾಗ ದುಡ್ಡನ್ನು ಪಕ್ಕದ ಸೀಟ್ ನಲ್ಲಿ ಕಾಣಿಸುವಂತೆ ಎತ್ತಿಟ್ಟಿದ್ದೆ. ಸಿಗ್ನಲ್ ನಲ್ಲಿ ಕಾರಿನ  ಪಕ್ಕ ಬಂದ ಅವನಿಗೆ 5  ರೂ. ಜಾಸ್ತಿ ಸೇರಿಸಿ ಕೊಟ್ಟೆ. ನೋಡಿದ ತಕ್ಷಣ ಆತ “5 ರೂ. ಜಾಸ್ತಿ ಇದೆ… ನಂಗೆ ಫ್ರೀ ಏನೂ ಬೇಡಾ…..ವ್ಯಾಪಾರ ಮಾಡಿ….  ವಿಶ್ವಾಸವಿದ್ದರೆ ಥ್ಯಾಂಕ್ಸ್  ಅಂತೀನೀ… ”  ಅಂದ. ಸರಿ, ಆತನ ಸ್ವಾಭಿಮಾನಕ್ಕೆ ನಾನೇಕೆ ಭಂಗ ತರಲಿ ಎಂದು ‘ಹಾಗಿದ್ದರೆ ಈ ಗಣಪತಿ ಮೂರ್ತಿಗೆ ಮುಡಿಸುವಷ್ಟು ಸಣ್ಣ  ಮಾಲೆ ಕೊಡಿ’ ಎಂದೆ. ಆತ ಹೂಮಾಲೆಯನ್ನು ಕತ್ತರಿಸಿ ಕೊಟ್ಟ.  ಅದು ನಿನ್ನೆ 10. ರೂ ಗೆ ಕೊಟ್ಟಷ್ಟೇ ಉದ್ದವಿತ್ತು.

Jasmine
ಇದೇನ್ರಿ, ನಿನ್ನೆ ಕೊಟ್ಟಷ್ಟೇ ಇದೆಯಲ್ಲ….5 ರೂ.ಗೆ  ಸಣ್ಣ ತುಂಡು ಸಾಕಿತ್ತು ‘ ಅಂದೆ.  ‘ಈವತ್ತು ಮಲ್ಲಿಗೆಗೆ ಕಡಿಮೆ ರೇಟ್  ಇದೆ’ ಅಂದ. ಹಾಗಿದ್ದರೆ, ಇನ್ನೊಂದು 10  ರೂ. ಗೆ ಕೊಡಿ ಅಂದೆ. ಇನ್ನೊಂದು ಮೊಳ ಹೂ ಕೊಂಡಿದ್ದಾಯಿತು.   ನಗುಮುಖದಿಂದ “ಥ್ಯಾಂಕ್ಸ್ ಮೇಡಂ”  ಅಂದ. ಮನೆ ತಲಪಿದ ಮೇಲೆ ಕುತೂಹಲಕ್ಕೆಂದು ಹೋಲಿಸಿ ನೋಡಿದಾಗ  ಎರಡೂ ಮಲ್ಲಿಗೆ ಮಾಲೆಗಳು  ಒಂದೇ ಅಳತೆಯವಾಗಿದ್ದುವು !!  ಮೊಳುದುದ್ದ ಹೂವು ಅದಾದರೂ ಮಾರುದ್ದದ ವಿಶ್ವಾಸ ಅದರಲ್ಲಿತ್ತು.
ಈ ಘಟನೆಯ ನಂತರ ನಾನು ಒಂದು ಅಭ್ಯಾಸ ರೂಢಿಸಿಕೊಂಡಿದ್ದೇನೆ. ಅದೇನೆಂದರೆ, ಸಿಗ್ನಲ್ ನಲ್ಲಿ ವ್ಯಾಪಾರಕ್ಕೆ ಕೆಲವೇ ಸೆಕೆಂಡ್ಸ್ ಸಮಯ ಸಿಗುವುದರಿಂದ, ಮೊದಲಾಗಿಯೇ 10 ರೂ. ಅನ್ನು ಪಕ್ಕದ ಸೀಟ್ ನಲ್ಲಿ ಸುಲಭವಾಗಿ ಸಿಗುವಂತೆ  ಎತ್ತಿಟ್ಟು, ಹೊರಡುವುದು.  ಆತ ಕಾರಿನ ಬಳಿ ಬಂದರೆ , ನನಗೆ ಹೂ ಬೇಕಾಗಿದ್ದರೂ-ಬೇಡದಿದ್ದರೂ, ತಪ್ಪದೆ ಹೂ ಕೊಳ್ಳುವುದು.

 ವೃತ್ತಿ ಯಾವುದೇ  ಇರಲಿ, ಅದರ ಬಗ್ಗೆ ಗೌರವ ಮತ್ತು ಪ್ರಾಮಾಣಿಕತೆ , ಪರಸ್ಪರ ವಿಶ್ವಾಸವನ್ನು ಗಳಿಸಿಕೊಡುತ್ತದೆ.   


2 comments:

  1. ಇಂತಹ ಅಪರೂಪದ ವ್ಯಕ್ತಿತ್ವಗಳು ಇನ್ನೂ ಭೂಮಿಯ ಮೇಲೆ ಅಸ್ಥಿತ್ವದಲ್ಲಿರುವುದರಿಂದಲೇ ಕಾಲ ಕಲಾಕ್ಕೆ ಮಳೆ ಬೆಳೆ.

    ಇವರೇ ನಮಗೆ ನಿಜ ಆದರ್ಶಪ್ರಾಯರು.

    ReplyDelete