Total Pageviews

Sunday, January 4, 2015

ಚಂದ್ರಮಾನ – ನಾಗತಿಹಳ್ಳಿ ಚಂದ್ರಶೇಖರ



ನವೆಂಬರ್ ತಿಂಗಳಲ್ಲಿ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ನುಡಿಸಿರಿ’ ಕಾರ್ಯಕ್ರಮದ ಅಂಗವಾಗಿ, ಕಾಲೇಜಿನ ಕಟ್ಟಡವೊಂದರ ನಾಲ್ಕೂ ಮಹಡಿಗಳಲ್ಲಿ ವಿವಿಧ ಮಳಿಗೆಗಳಿದ್ದುವು.


ನಿರ್ಧಿಷ್ಟ ಉದ್ದೇಶ-ಗುರಿ ಇಲ್ಲದೆ, ಯಾವುದನ್ನು ಕೊಳ್ಳಬೇಕೆಂಬ ಇರಾದೆಯೂ ಇಲ್ಲದೆ, ಎಲ್ಲಾ ಮಳಿಗೆಗಳಿಗೂ ಎಡತಾಕುತ್ತಾ ಬಂದಾಗ  ಒಂದು ಕಡೆ “ನಾಗತಿಹಳ್ಳಿ ಚಂದ್ರಶೇಖರ” ಅವರ ಪುಸ್ತಕಗಳ ಪ್ರದರ್ಶನ ಎಂಬ ಗುರುತು ಕಾಣಿಸಿತು.ಒಳ ಹೊಕ್ಕಾಗ ಅಲ್ಲಿ ಖುದ್ದಾಗಿ  ಶ್ರೀ ನಾಗತಿಹಳ್ಳಿ ಚಂದ್ರಶೇಖರವರೇ ಇದ್ದರು! ಆಸಕ್ತರಲ್ಲಿ   ಕುಶಲೋಪರಿ ಮಾತನಾಡುವುದರ ಜತೆಗೆ ಪುಸ್ತಕಕ್ಕೆ  ಹಸ್ತಾಕ್ಷರವನ್ನೂ ಹಾಕುತ್ತಿದ್ದರು.  
Chandramaana Nagatihalliಕೆಲವು ವರ್ಷಗಳ ಹಿಂದೆ ನನಗೆ ಉದ್ಯೋಗ ನಿಮಿತ್ತ, ಪರದೇಶಗಳಿಗೆ ಹೋಗಬೇಕಾದ ಸಂದರ್ಭಗಳು ಬಂದಿದ್ದುವು. ಯಾವುದೇ ಪರದೇಶಗಳಿಗೆ ಹೊರಡುವ ಮೊದಲು ಆ ದೇಶಗಳ ರೀತಿ-ರಿವಾಜು, ಶಿಷ್ಟಾಚಾರಗಳ ಬಗ್ಗೆ ಸ್ವಲ್ಪವಾದರೂ ಮುಂಚಿತವಾಗಿ ತಿಳಿದಿದ್ದರೆ ಅನುಕೂಲ ಮತ್ತು ನಾವು ಅಲ್ಲಿ ಬೆಪ್ಪುತಕ್ಕಡಿಯಂತಾಗುವ ಸನ್ನಿವೇಶಗಳನ್ನು ತಡೆಯಬಹುದು. ಈ ಉದ್ದೇಶದಿಂದ ಮೈಸೂರಿನ ಪುಸ್ತಕ ಮಳಿಗೆಗಳಲ್ಲಿ ಪ್ರವಾಸ ಕಥನಗಳಿಗಾಗಿ ಹುಡುಕಿದಾಗ  ನಾಗತಿಹಳ್ಳಿಯವರ ಪ್ರವಾಸ ಕಥನವಾದ ‘ಅಯನ’  ಲಭಿಸಿತ್ತು, ಅದನ್ನು ಕೊಂಡು ಓದಿದ್ದೆ. ಅವರ ಹಾಸ್ಯಭರಿತ ಶೈಲಿಯ ನಿರೂಪಣೆ ಬಹಳ ಇಷ್ಟವಾಯಿತು. ಆಮೇಲೆ, ಅವರ ಅಮೇರಿಕಾ! ಅಮೇರಿಕಾ!’ ಮತ್ತು ‘ನನ್ನ ಗ್ರಹಿಕೆಯ ನೇಪಾಳ′ ಪುಸ್ತಕಗಳನ್ನೂ ಓದಿದ್ದೇನೆ.  ಒಟ್ಟಾರೆಯಾಗಿ ನನಗೆ ಪ್ರವಾಸಕಥನಗಳ ಬಗ್ಗೆ ಆಸಕ್ತಿ ಬರಲು ಈ ಓದು ಪ್ರೇರೇಪಿಸಿತು ಅನಿಸುತ್ತದೆ.
ವಿಭಿನ್ನ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆಗೈದ ಇವರ ಬದುಕು-ಬರಹ-ಆಸಕ್ತಿ-ಸಾಧನೆಗಳ ಕುರಿತ ವಿಮರ್ಶಾ ಬರಹಗಳ ಸಂಕಲನವಾದ  ‘ಚಂದ್ರಮಾನ’ ಪುಸ್ತಕವು ತನ್ನ  ವಿಶಿಷ್ಟವಾದ, ಕಿತ್ತು ಹೋದ ಛಾಯಾಚಿತ್ರದ ಚೌಕಟ್ಟಿನ ಮುಖಪುಟದಿಂದಲೇ ಆಕರ್ಷಿಸಿತು. ಅದನ್ನು ಕೊಂಡು, ನಾಗತಿಹಳ್ಳಿಯವರ ಹಸ್ತಾಕ್ಷರವನ್ನೂ ಪಡೆದು ಬಂದಿದ್ದಾಯಿತು. ತೀರಾ ಸರಳವಾಗಿ, ಅತ್ಮೀಯವಾಗಿ ಮಾತನಾಡಿಸಿದರು.
ಈ ಪುಸ್ತಕದಲ್ಲಿ ನಾಗತಿಹಳ್ಳಿಯವರನ್ನು ಹತ್ತಿರದಿಂದ ಬಲ್ಲ ಹಲವಾರು ಹಿತೈಷಿಗಳು  ಅವರ ವ್ಯಕ್ತಿತ್ವ-ಸಾಧನೆಗಳನ್ನು ಪರಿಚಯಿಸಿದ್ದಾರೆ. ಅವುಗಳಲ್ಲಿ ಕೆಲವು ವಾಕ್ಯಗಳು ಬಹಳ ಆಪ್ತವೆನಿಸಿದುದುವು. ಉದಾ:
  • ಒಟ್ಟಾರೆಯಾಗಿ ಹೇಳಬೇಕಾದರೆ ನಾಗತಿಹಳ್ಳಿಯವರಿಗೆ ಬೇರುಗಳೂ ಬೇಕು, ರೆಕ್ಕೆಗಳೂ ಬೇಕು” ಪುಟ 78  -ಡಾ.ಸಿ.ಎನ್. ರಾಮಚಂದ್ರನ್ 
  • “ಚಂದ್ರು ಬಡತನವನ್ನು ಬಹಳ ಸೃಷ್ಟಿಶೀಲ ಗುಣವೆಂದು ಭಾವಿಸಿಕೊಂಡವರು. ಹಣ ಬಂದಾಗ ತಾನು ಬಡವನಾಗಿದ್ದೆ ಎಂದುಬನ್ನು ಮರೆತಿಲ್ಲ. ಬಡವನಾದಾಗ ತಾನು ಶ್ರೀಮಂತನಾಗುತ್ತೀನಿ ಅನ್ನುವ ಕನಸು ಬಿಟ್ಟಿಲ್ಲ″  ಪುಟ 82 –  ಪ್ರೊ.ಎಂ.ಕೃಷ್ಣೇಗೌಡ 
  • ಬಹಳ ಜನ ಅವರನ್ನು ಮೇಷ್ಟ್ರು ಎಂದು ಕರೆಯುತ್ತಾರೆ. ನನಗೆ ಅವರೇ ವಿಶ್ವವಿದ್ಯಾಲಯ”  ಪುಟ 85 – ಶ್ರೀ ವಿಶ್ವೇಶ್ವರ ಭಟ್.  

Hema- Nagatihalli - Copy
ನನಗೆ ಅನಿಸಿದುದೇನೆಂದರೆ ಸಾಮಾನ್ಯರೂ ಅಸಾಮಾನ್ಯ ಕೆಲಸವನ್ನು  ಮಾಡಲು ಸಾಧ್ಯ ಎಂದು ತಮ್ಮ ಕೃತಿ ಮತ್ತು ಕೆಲಸಗಳ ಮೂಲಕ ನಾಗತಿಹಳ್ಳಿ ಚಂದ್ರಶೇಖರ ಅವರು ನಿರೂಪಿಸಿದ್ದಾರೆ. ಅವರಿಂದ ಕಾರ್ಯವೈಖರಿಯಿಂದ ನಾವು  ಕಲಿತುಕೊಳ್ಳಬೇಕಾದ ವಿಚಾರಗಳು ಸಾಕಷ್ಟಿವೆ.

– ಹೇಮಮಾಲಾ.ಬಿ

1 comment:

  1. ನಾಗತಿಹಳ್ಳಿಯವರು ಸರಳರಲ್ಲಿ ಸರಳ ಸಾಹಿತಿ.
    ಭಾಷಾ ಬಳಕೆಯಲ್ಲಿ ಅವರು ಸುಲಲಿತ ಶೈಲಿ.
    ಸಾಹಿತ್ಯ, ಧಾರವಾಹಿ ಮತ್ತು ಚಲನಚಿತ್ರಗಳ ಪಳಗಿದ ಕೈ.
    ನಿಮ್ಮ ಈ ಬರಹ ನಮ್ಮನ್ನು ಅವರ ಬರವಣಿಗೆಯತ್ತ ಸೆಳೆದೊಯ್ಯುವ ಪರಿಕರವಾಗಲಿ.

    ಹಿಂದೆ ನಾನು ಕಸ್ತೂರಿ ಟೀವಿಯಲ್ಲಿ ಛಾಯಾಗ್ರಾಹಕನಾಗಿದ್ದಾಗ ಅವರ ಜೊತೆ ಬಹಳ ಕೆಲಸ ಮಾಡುವ ಅವಕಾಶ ದೊರೆತಿತ್ತು.

    ReplyDelete